ನಾಡಿನ ಭಕ್ತಗಣಕ್ಕೆ ಶ್ರೀ ಗವಿಸಿದ್ಧೇಶನ ಜಾತ್ರೆಯ ಬಗ್ಗೆ ಅತ್ಯಂತ ಕುತೂಹಲ. ಜಾತ್ರೆ ಹೇಗೆ ನಡೆಯುತ್ತದೆ? ಅಜ್ಜವರ ನಿರ್ಣಯವೇನು? ಜಾತ್ರೆ ನಡೆಯುವುದೋ ಇಲ್ಲವೋ? ಹೀಗೆ ಹತ್ತು ಹಲವು ಸಂಗತಿಗಳು. ಜಾತ್ರೆ ನಡೆಸುತ್ತೇನೆ ಎನ್ನಲು, ಜಾತ್ರೆ ನಡೆಸುವುದಿಲ್ಲವೆನ್ನಲು ನಾನಾರು? ಒಂದೆಡೆ ದೈವಿಶಕ್ತಿ ಇನ್ನೊಂದೆಡೆ ಭಕ್ತರ ಭಕ್ತಿಯ ಶಕ್ತಿ. ಈ ಎರಡೂ ದಿವ್ಯ ಶಕ್ತಿಯ ಸಂಗಮವನ್ನು ನಾನು ಕೂಡಿಸುವೆನೆಂದಾಗಲಿ ಅಥವಾ ನಿಲ್ಲಿಸುವೆನೆಂದಾಗಲಿ ಹೇಳಿದರೆ ಅಹಂಕಾರದ ಮಾತಾದೀತು. ಬಸವಣ್ಣನವರು ಹೇಳುವಂತೆ “ಆನು ದೇವಾ ಹೊರಗಣವನು ಕೂಡಲ ಸಂಗಮದೇವಾ, ನಿಮ್ಮ ನಾಮವಿಡಿದ ಅನಾಮಿಕ ನಾನು” ಇಂದು ದೈವೇಚ್ಛೇ ಭಕ್ತರ ನಿರೀಕ್ಷೆ ಇವರೆಡರ ಪರೀಕ್ಷೆಯ ಸಂಧಿಕಾಲ.ಜಾತ್ರೆಯನ್ನೂ ನಡೆಸಬೇಕು, ಸರ್ಕಾರದ ಆದೇಶವನ್ನೂ ಪಾಲಿಸಬೇಕು. ಕಾನೂನನ್ನು ಮೀರಿರಬಾರದು, ಸಂಪ್ರದಾಯವನ್ನು ಮುರಿದಿರಬಾರದು. ಪರಿಸರ ಸ್ನೇಹಿ ಜಾತ್ರೆಯ ಜೊತೆಗೆ, ಪರಿಸ್ಥಿತಿ ಸ್ನೇಹಿ ಜಾತ್ರೆಯನ್ನು ಮಾಡುವ ಮಧ್ಯಮ ಮಾರ್ಗವನ್ನು ಅನುಸರಿಸಬೇಕಾಗಿದೆ. ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮ ಒಳಿತಿಗಾಗಿ ಎನ್ನುವ ಉನ್ನತ ಭಾವದೊಂದಿಗೆ ಈ ವರ್ಷದ ಜಾತ್ರೆ ಸರಳ ಮತ್ತು ವೈಶಿಷ್ಟ್ಯಪೂರ್ಣವಾಗಿ ಧಾರ್ಮಿಕ ವಿಧಿವಿಧಾನಗಳಿಗೆ ಮಾತ್ರ ಸೀಮಿತಗೊಳಿಸೋಣ. ಇಷ್ಟು ವರ್ಷ ಮಠದ ಅಂಗಳದಲ್ಲಿ ಗವಿಸಿದ್ಧೇಶ್ವರನ ರಥ ಎಳೆಯುತ್ತಿತ್ತು . ಭಕ್ತರು ಅದನ್ನು ನೋಡಲು ಬರುತ್ತಿದ್ದರು. ಈ ವರ್ಷ ನಿಮ್ಮ ಹೃದಯಂಗಳದಲ್ಲಿ ಆತನ ದಿವ್ಯ ಸ್ಮರಣೆಯ ರಥ ಎಳೆಯಲಿ ಅದನ್ನು ನೋಡಲು ಗವಿಸಿದ್ಧೇಶ್ವರನೇ ನಿಮ್ಮ ಮನೆಗೆ ಬರುತ್ತಾನೆಂದು ನನ್ನ ಭಾವನೆ.:-ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ